ಮಂಗಳೂರಿನಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಎಂಬಾತನನ್ನು ನಾಲ್ವರ ತಂಡವೊಂದು ತಲವಾರಿನಲ್ಲಿ ಕೊಚ್ಚಿ ಕೊಲೆ ಮಾಡಿದೆ. ಮಂಗಳೂರು, ಮೇ 1 : ಮಂಗಳೂರಿನಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಎಂಬಾತನನ್ನು ನಾಲ್ವರ ತಂಡವೊಂದು ತಲವಾರಿನಲ್ಲಿ ಕೊಚ್ಚಿ ಕೊಲೆ ಮಾಡಿದೆ. ಸುರತ್ಕಲ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಹಾಸ್‌ ಶೆಟ್ಟಿ ಕೊಲೆಯಾದವನು. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ತಲವಾರು ದಾಳಿ ನಡೆಸಿದ್ದು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.

2022ರ ಜುಲೈ 28ರಂದು ಸುರತ್ಕಲ್ ಪೇಟೆಯಲ್ಲಿ ಫಾಜಿಲ್ ಹತ್ಯೆಯಾಗಿತ್ತು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್ ಹತ್ಯೆ ನಡೆದಿತ್ತು ಎನ್ನಲಾಗಿತ್ತು. ಫಾಜಿಲ್ ಹತ್ಯೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಪ್ರತೀಕಾರ ರೂಪದಲ್ಲಿ ಈಗ ಕೊಲೆ ಮಾಡಲಾಗಿದೆ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದಲ್ಲಿದ್ದು ಗೋರಕ್ಷಣೆ ವಿಷಯದಲ್ಲಿ ಸಕ್ರಿಯನಾಗಿದ್ದ. ಕೊಲೆ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ. ಇಂದು ರಾತ್ರಿ 8.30ರ ಸುಮಾರಿಗೆ ಆತನ ಮೇಲೆ ತಲವಾರು ದಾಳಿ ಮಾಡಿ ಬರ್ಬರವಾಗಿ ಕೊಂದು ಹಾಕಿದ್ದಾರೆ. ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.